ಗ್ರೀಸಿನ ಶಿಕ್ಷಣ ಪದ್ಧತಿ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
 
ಭಾರತದಂತೆ ಗ್ರೀಸ್ ದೇಶವೂ ಪ್ರಾಚೀನ ಕಾಲದಲ್ಲಿ ನಾಗರಿಕತೆಯ ಉತ್ತುಂಗ ಶಿಖರವನ್ನೇರಿ ಸಾಹಿತ್ಯ, ಲಲಿತಕಲೆ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಮುನ್ನಡೆ ಸಾಧಿಸಿತ್ತು ಪಾಶ್ಚಾತ್ಯಜ್ಞಾನ ರಾಜ್ಯದ ಮೇಲೆ ಇತ್ತೀಚಿನ ವರೆಗೂ ತನ್ನ ಪ್ರಭಾವವನ್ನು ಬೀರುತ್ತ ಬಂತು. ಹಾಗೆಯೆ ಪ್ರಾಚೀನ ಗ್ರೀಕರ ಶಿಕ್ಷಣ ಪದ್ಧತಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದ್ದು ಪಾಶ್ಚಾತ್ಯ ಶಿಕ್ಷಣವನ್ನು ಇಂದಿಗೂ ಪರಿಣಾಮಗೊಳಿಸುತ್ತ ಬಂದಿದೆ. ಅಲ್ಲಿ ಸದ್ಯದಲ್ಲಿ ಅಸ್ತಿತ್ವದಲ್ಲಿರುವ ಶಿಕ್ಷಣ ಅಂಥ ವೈಶಿಷ್ಟ್ಯಗಳಿಂದ ಕೂಡಿರದಿದ್ದರೂ ಆ ದೇಶ ಪಾಶ್ಚಾತ್ಯ ಶಿಕ್ಷಣರಂಗದ ಮೇಲೆ ಬೀರಿರುವ ಪ್ರಭಾವದ ದೃಷ್ಟಿಯಿಂದ ಪರಿಶೀಲನಾರ್ಹವೆನಿಸುತ್ತದೆ. 

	ಪ್ರಾಚೀನ ಗ್ರೀಸಿನಲ್ಲಿ ಶಿಕ್ಷಣ : ಯುವಜನರನ್ನು ಒಳ್ಳೆಯ ಪೌರರನ್ನಾಗಿ ಮಾಡಲು ಶಿಕ್ಷಣ ಒಳ್ಳೆಯ ಸಾಧನವೆಂಬುದನ್ನು ಅರಿತಿದ್ದ ಪ್ರಾಚೀನ ಗ್ರೀಕರು ಶಿಕ್ಷಣವನ್ನು ಆದ್ಯತೆಯ ಸೇವಾವ್ಯವಸ್ಥೆಯೆಂದು ಪರಿಗಣಿಸಿದ್ದರು. ಆಗಾಗ ಒದಗುತ್ತಿದ್ದ ಬಾಹ್ಯ ಶತ್ರುಗಳ ದಾಳಿಯನ್ನೂ ನಗರರಾಜ್ಯಗಳಿಂದಾಗುತ್ತಿದ್ದ ಆಂತರಿಕ ದಾಳಿಗಳನ್ನೂ ಎದುರಿಸಿ ಅವರು ಆತ್ಮರಕ್ಷಣೆ ಮಾಡಿಕೊಳ್ಳಬೇಕಾಗಿತ್ತು. ಅಲ್ಲದೆ, ಅಲ್ಲಿ ಅಧಿಕ ಸಂಖ್ಯೆಯಲ್ಲಿದ್ದ ಗುಲಾಮರ ಮೇಲೆ ತಮ್ಮ ವರಿಷ್ಕ ಅಧಿಕಾರವನ್ನು ಉಳಿಸಿಕೊಂಡು ಹೋಗಬೇಕಾಗಿತ್ತು. ಆದ್ದರಿಂದ ಶಿಕ್ಷಣ, ಸೈನಿಕ ಕಾರ್ಯಾಚರಣೆಯಲ್ಲಿ ಸಾಹಸದಿಂದ ಭಾಗವಹಿಸಬಲ್ಲ ದೃಢಕಾಯರಾದ ಯುವಕರನ್ನು ರೂಪಿಸಬೇಕಾಗಿತ್ತು. ಈ ಜೀವನ ಪರಿಸ್ಥಿತಿಗೆ ಅನುಕೂಲಿಸುವಂತೆ ಅಂದಿನ ಶಿಕ್ಷಣಪದ್ಧತಿ ಏರ್ಪಟ್ಟಿತ್ತು. ಆತ್ಮರಕ್ಷಣೆಗೂ ಸಮರಸೇವೆಗೂ ಸಿದ್ಧಪಡಿಸುವುದು ಶಿಕ್ಷಣದ ಪ್ರಧಾನ ಗುರಿಯಾಗಿತ್ತು. ಶ್ರೀಮಂತರು ವಾಣಿಜ್ಯ, ಉದ್ಯೋಗ ಮುಂತಾದ ಕಸಬುಗಳು ತಮ್ಮ ಆತ್ಮಗೌರವಕ್ಕೆ ತಕ್ಕವಲ್ಲವೆಂದು ಭಾವಿಸಿದ್ದುದರಿಂದ ಅವನ್ನು ಅಲ್ಲಿನ ಜಿತ ಜನಾಂಗ ನಿರ್ವಹಿಸುತ್ತಿತ್ತು. ಆದ್ದರಿಂದ ಅವರ ಶಿಕ್ಷಣ ಪದ್ಧತಿಯಲ್ಲಿ ತಾಂತ್ರಿಕ ಮತ್ತು ವಾಣಿಜ್ಯೋದ್ಯಮಗಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿರಲಿಲ್ಲ.

	ಪ್ರಾಚೀನ ಗ್ರೀಸಿನ ಶಿಕ್ಷಣ ಪದ್ಧತಿಯಲ್ಲಿ ಎರಡು ಪ್ರಕಾರಗಳನ್ನು ಗುರುತಿಸಬಹುದು. ಬೌದ್ಧಿಕ ಶಿಕ್ಷಣಕ್ಕೆ ಬೆನ್ನು ತಿರುವಿಸಿ ಯುವಕರನ್ನು ಸಮರಶೂರರನ್ನಾಗಿ ಮಾಡುವ ಉದೇಶವನ್ನು ಹೊಂದಿದ್ದ ಪ್ರಕಾರ ಸ್ಪಾರ್ಟದಂಥ ಕೆಲವು ನಗರರಾಜ್ಯಗಳಲ್ಲೂ ಮಕ್ಕಳು ಸರ್ವಾಂಗೀಣ ಶಿಕ್ಷಣವನ್ನು ಪಡೆಯಬೇಕೆಂಬ ದೃಷ್ಟಿಯನ್ನು ಹೊಂದಿದ್ದ ಇನ್ನೊಂದು ಪ್ರಕಾರ ಆಥೆನ್ಸಿನಂಥ ನಗರರಾಜ್ಯಗಳಲ್ಲೂ ಅಸ್ತಿತ್ವದಲ್ಲಿತ್ತುವು. ಈ ಭಿನ್ನೆತೆಗೆ ಆಯಾ ನಗರರಾಜ್ಯದಲ್ಲಿದ್ದ ಭಿನ್ನ ಜೀವನ ಪರಿಸ್ಥಿತಿಯೂ ಅಲ್ಲಿನ ಜನತೆ ತಳೆದಿದ್ದ ಜೀವನದೃಷ್ಟಿಯೂ ಕಾರಣವೆನಿಸಿದ್ದುವು. ಮೇಲೆ ಸೂಚಿಸಿರುವ ಎರಡು ನಗರರಾಜ್ಯಗಳ ಶಿಕ್ಷಣ ಪ್ರಕಾರಗಳ ಪರಿಶೀಲನೆಯಿಂದ ಪ್ರಾಚೀನ ಗ್ರೀಸಿನ ಶಿಕ್ಷಣಪದ್ಧತಿಯನ್ನು ಪರಿಚಯ ಮಾಡಿಕೊಳ್ಳಬಹುದು. 

	ಸ್ಪಾರ್ಟನ್ನರ ಶಿಕ್ಷಣ : ತಮ್ಮ ನಗರರಾಜ್ಯದಲ್ಲಿ ಅಲ್ಪಸಂಖ್ಯಾತರಾಗಿದ್ದ ಸ್ಪಾರ್ಟನ್ನರು ಅಲ್ಲಿಯ ಬಹುಸಂಖ್ಯಾತ ಗುಲಾಮರ ಮೇಲೆ ತಮ್ಮ ಅಧಿಕಾರವನ್ನು ಮುಂದುವರಿಸಿಕೊಂಡು ಬರಬೇಕಾಗಿತ್ತು. ಆಗಾಗ ಆಗುತ್ತಿದ್ದ ದಾಳಿಗಳಿಂದಲೂ ರಕ್ಷಿಸಿಕೊಳ್ಳಬೇಕಾಗಿತ್ತು. ಆದ್ದರಿಂದ ಯುವಕರನ್ನು ಸಮರಸೇವೆಗೆ ಸಿದ್ಧಪಡಿಸುವುದು ಅವರ ಶಿಕ್ಷಣದ ಮುಖ್ಯೋದ್ದೇಶವಾಗಿತ್ತು. ಮಕ್ಕಳಲ್ಲಿ ಧೈರ್ಯಸ್ಥೈರ್ಯಾದಿ ಗುಣಗಳನ್ನು ಬೆಳೆಸಿ ಶೂರಯೋಧರನ್ನಾಗಿ ಮಾಡುವುದು ಶಕ್ಷಣದ ಕರ್ತವ್ಯವಾಗಿತ್ತು. ಅದಕ್ಕನುಕೂಲಿಸುವಂತೆ ಹುಟ್ಟಿದ ಮಕ್ಕಳನ್ನೆಲ್ಲ ನಿಸರ್ಗದ ಕರಾಳ ಪರೀಕ್ಷೆಗೆ ಒಡ್ಡಿ ಅಂಗವಿಕಲರನ್ನೂ ನಿರ್ಬಲ ಶಿಶುಗಳನ್ನೂ ಕೊಂದುಹಾಕುತ್ತಿದ್ದರು. ಹಾಗೂ ಉಳಿದುಕೊಂಡ ಮಕ್ಕಳನ್ನೂ 7 ನೆಯ ವರ್ಷದಿಂದ ತಂದೆತಾಯಿಗಳಿಂದ ಬೇರ್ಪಡಿಸಿ ಶಿಕ್ಷಣ ಶಿಬಿರಕ್ಕೆ ಸಾಗಿಸುತ್ತಿದ್ದರು. 14 ವರ್ಷದ ವರೆಗೆ ಕಠಿಣ ರೀತಿಯ ಸೈನಿಕ ತರಬೇತಿ ನೀಡುತ್ತಿದ್ದರು. ಅವರನ್ನು ತಂಡಗಳನ್ನಾಗಿ ವಿಂಗಡಿಸಿ ಅವರಲ್ಲೇ ಸಾಹಸಿ ಬಾಲಕನೊಬ್ಬನನ್ನು ನಾಯಕನನ್ನಾಗಿ ನೇಮಿಸುತ್ತಿದ್ದರು. ಈ ಶಿಕ್ಷಣ ರಾಜ್ಯದ ನೇರ ನಿಯಂತ್ರಣದಲ್ಲಿ ನಡೆಯುತ್ತಿತ್ತು. ಶಿಸ್ತಿನ ಸೈನಿಕ ಶಿಕ್ಷಣದಲ್ಲಿ ದೇಹದಂಡನೆ ಪ್ರಧಾನ ಅಂಶವಾಗಿತ್ತು. ಅದನ್ನು ಶಿಕ್ಷೆಯ ರೂಪದಲ್ಲದೆ ಸಹನೆ, ಸಹಿಷ್ಣುತೆ ಮುಂತಾದ ಗುಣಗಳನ್ನು ಪರೀಕ್ಷಿಸುವಾಗಲೂ ಪ್ರಯೋಗಿಸುತ್ತಿದ್ದರು. ಅವರಲ್ಲಿ ಯುದ್ಧಾಚರಣೆಯ ಸಾಹಸಪೂರ್ಣ ಹೋರಾಟದ ಪ್ರವೃತ್ತಿಯನ್ನು ಬೆಳೆಸಲು ಮುಷ್ಟಿಯುದ್ಧ ಮಾಡಿಸುತ್ತಿದ್ದರು. ಹದಿನಾರನೆಯ ವರ್ಷದ ಪೂರ್ತ ಸೈನಿಕ ಶಿಕ್ಷಣ ಪಡೆದ ಯುವಕರು ರಕ್ಷಕ ಸೇನೆಯನ್ನು ಸೇರುತ್ತಿದ್ದರು. ಅಲ್ಲಿ ಎರಡು ವರ್ಷಗಳ ಕಾಲ ರಕ್ಷಣಾ ಕಾರ್ಯದಲ್ಲಿ ಕಠಿಣ ಶಿಸ್ತಿನ ತರೆಬೇತು ಹೊಂದಿ 30 ನೇ ವರ್ಷದಿಂದ ಪೌರತ್ವವನ್ನು ಪಡೆಯುತ್ತಿದ್ದರು. ಆದರೂ ಅವರು ತೀರ ಮಯಸ್ಸಾಗಿ ದುರ್ಬಲರಾಗುವವರೆಗೂ ಸಮರಸೇವೆಯನ್ನು ನಿರ್ವಹಿಸಬೇಕಾಗಿದ್ದುದರ ಜೊತೆಗೆ ಅಗತ್ಯವೆನಿಸುವ ತರಬೇತಿಯನ್ನೂ ಪಡೆಯಬೇಕಾಗಿತ್ತು. ಸ್ಟಾರ್ಟನ್ನರ ಶಿಕ್ಷಣವ್ಯವಸ್ಥೇಯಲ್ಲಿ ಓದುಬರೆಹ ಕಲಿಸುತ್ತಿದ್ದರೆ ಇಲ್ಲವೆ ಎಂಬ ಅಂಶ ತಿಳಿದುಬಂದಿಲ್ಲ. ಅವರಿಗೆ ಕುಂಭಕಲೆಯಲ್ಲಾಗಲಿ ಲಲಿತವಿದ್ಯೆಗಳಲ್ಲಾಗಲಿ ಆಸಕ್ತಿ ಇದ್ದಂತೆ ತೋರುವುದಿಲ್ಲ. ಆದರೆ ಯುದ್ಧದಲ್ಲಿ ಹೋರಾಡಿದ ಶೂರರ ಕಾವ್ಯಗಳನ್ನೂ ರಣಗೀತೆಗಳನ್ನೂ ಪಠಿಸುತ್ತಿದ್ದರು. ಕುಸ್ತಿ, ಕವಾಯತು ಮುಂತಾದ ಶಿಸ್ತಿನ ಅಭ್ಯಾಸಗಳನ್ನೊಳಗೊಂಡ ನೃತ್ಯಗಳಲ್ಲೂ ಅವರಿಗೆ ಆಸಕ್ತಿಯಿತ್ತು. ಗ್ರೀಸಿನ ಇತರ ನಗರರಾಜ್ಯಗಳಲ್ಲಿ ಮಹಿಳೆಯರಿಗೆ ತಾಯ್ತನದ ಶಿಕ್ಷಣವನ್ನು ಮಾತ್ರ ಕೊಡುತ್ತಿದ್ದಾಗ ಸ್ಪಾರ್ಟನ್ನರು ಅವರಿಗೆ ಗಂಡಸರಂತೆ ಅಂಗಸಾಧನೆಯಲ್ಲೂ ಹೊರಗಿನ ಚಟುವಟಿಕೆಗಳಲ್ಲೂ ಶಿಕ್ಷಣವೀಯುತ್ತಿದ್ದರು. ಅಂಥ ಶಿಕ್ಷಣದಿಂದ ಅವರ ಮಕ್ಕಳು ಬಲಾಢ್ಯರೂ ಶೂರರೂ ಆಗುವರೆಂಬ ಆಶೋತ್ತರವೇ ಇದಕ್ಕೆ ಕಾರಣ. ಆದರೆ ಅವರನ್ನು ತಂದೆ ತಾಯಿಗಳಿಂದ ಬೇರ್ಪಡಿಸುತ್ತಿರಲಿಲ್ಲ. ಒಟ್ಟನಲ್ಲಿ ಸ್ಟಾರ್ಟನ್ನರ ಶಿಕ್ಷಣ ಅವರ ಸಂಕುಚಿತ ಗುರಿಯ ಪರಿಮಿತಿಯಲ್ಲಿ ಪರಿಣಾಮಕಾರಿಯಾಗಿಯೇನೂ ಇರುತ್ತಿತ್ತು. 

	ಆಥೀನಿಯನ್ನರ ಶಿಕ್ಷಣ : ಆಥೆನ್ಸ್ ನಗರರಾಜ್ಯದ ಜನತೆ ಸ್ಪಾರ್ಟನರಿಗಿಂತ ಭಿನ್ನವಾದ ಜೀವನದೃಷ್ಟಿಯನ್ನು ಹೊಂದಿದ್ದರು. ಅವರ ಸ್ಥಿತಿಗತಿಗಳೂ ಭಿನ್ನವಾಗಿದ್ದುವು. ಯುವಕರು ಯುದ್ಧಕಾಲದ ಸೈನಿಕರಾಗಿ ಹೋರಾಡುವುದರ ಜೊತೆಗೆ ಶಾಂತಿಕಾಲದ ಸತ್ಪೌರರಾಗಿಯೂ ಬಾಳಬೇಕೆಂಬುದು ಅವರ ಆಶಯವಾಗಿತ್ತು. ಅವರು ಪ್ರತಿಭಾವಂತರಾಗಿ ಬಾಳಿ ತಮ್ಮ ಪ್ರತಿಭೆಯ ಕಾಣಿಕೆಯನ್ನು ದೇಶಕ್ಕೆ ಸಲ್ಲಿಸಿ ಸಂಸ್ಕøತಿ ನಾಗರಿಕತೆಗಳ ರಕ್ಷಕರೂ ಪೋಷಕರೂ ಆಗಬೇಕೆಂದು ಆಶಿಸಿದ್ದರು. ಈ ದೃಷ್ಟಿ ಅವರ ಶಿಕ್ಷಣದ ಸ್ವರೂಪದಲ್ಲಿ ಪ್ರತಿಬಿಂಬಿಸಿತ್ತು. ಶಿಕ್ಷಣ ಮಕ್ಕಳನ್ನು ಸೈನಿಕ ಕಾರ್ಯಾಚರಣೆಗೆ ಸಿದ್ಧಪಡಿಸುವುದರ ಜೊತೆಗೆ ಅವರ ಬೌದ್ಧಿಕ, ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳೆವಣಿಗೆಯನ್ನು ಸಮರ್ಪಕವಾಗಿ, ಸಮರಸವಾಗಿ ಸಾಧಿಸಿ ಅವರನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ಮಾಡಬೇಕಾಗಿತ್ತು. ಎಂದರೆ ಶಿಕ್ಷಣ ವ್ಯಕ್ತಿತ್ವದ ಬೆಳೆವಣಿಗೆಯಲ್ಲಿ ಯಾವುದನ್ನೂ ನಿರ್ಲಕ್ಷಿಸಬಾರದು ; ಯಾವುದನ್ನೂ ಅತಿಯಾಗಿ ಮಾಡಹೋಗಬಾರದು ಎಂಬುದು ಅವರ ನಿತ್ಯ ಮಂತ್ರವಾಗಿತ್ತು. ಇಂಥ ಸಮರಸ ವ್ಯಕ್ತಿತ್ವದ ರೂಪಣೆಗಾಗಿ ಶಿಕ್ಷಣವನ್ನು ಎರಡು ಹಂತಗಳಾಗಿ ವ್ಯವಸ್ಥೆಗೊಳಿಸಿದ್ದರು. 7 ರಿಂದ 16 ನೆಯ ವರ್ಷದ ತನಕ ಮೂಲ ಅಥವಾ ಪ್ರಾಥಮಿಕ ಶಿಕ್ಷಣ ; 14 ರಿಂದ 18 ರ ವರೆಗೆ ಪ್ರೌಢಶಿಕ್ಷಣ. ಶಿಕ್ಷಣ ವ್ಯವಸ್ಥೆ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿರದೆ ವೈಯಕ್ತಿಕವಾಗಿತ್ತು. ಹದಿನೆಂಟು ತುಂಬಿದ ಯುವಕರು ಎರಡು ವರ್ಷಕಾಲ ಕಡ್ಡಾಯ ಸೈನಿಕ ಶಿಕ್ಷಣ ಪಡೆಯುತ್ತಿದ್ದರು. ಮುಂದೆ ಆ ನಗರ ರಾಜ್ಯ ಮ್ಯಾಸಿಡೋನಿಯದ ಅಧೀನಕ್ಕೆ ಬಂದ ಮೇಲೆ ರಕ್ಷಣೆಯ ಆವಶ್ಯಕತೆ ಅಷ್ಟಾಗಿ ಇಲ್ಲದ್ದರಿಂದ ಕಡ್ಡಾಯ ಸೈನಿಕ ಶಿಕ್ಷಣದ ಈ ಕಾಲವನ್ನು ತತ್ತ್ವಶಾಸ್ತ್ರ, ಸಾಹಿತ್ಯ ಮುಂತಾದ ಜ್ಞಾನಪ್ರದ ವಿಷಯಗಳ ವ್ಯಾಸಂಗಕ್ಕೆ ವಿನಯೋಗಿಸುತ್ತಿದ್ದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತಗಳಲ್ಲಿ ಸಾಹಿತ್ಯ ಮತ್ತು ಕಲಾಪ್ರದ ಸಂಗೀತದ ಅಭ್ಯಾಸಕ್ಕೆ ಪ್ರಾಶಸ್ತ್ಯವಿತ್ತು. ದೈಹಿಕ ಶಿಕ್ಷಣಕ್ಕೆ ಪ್ರಾಶಸ್ತ್ಯವಿದ್ದರೂ ದೇಹವರ್ಧನವೊಂದೇ ಅದರ ಉದ್ದೇಶವಾಗಿರದೆ ವ್ಯಕ್ತಿಯ ನಡೆನಿಲವುಗಳನ್ನು ಸಿರಪಡಿಸಿ ಅಂಗಸೌಷ್ಠವಾದಿ ಸೌಂದರ್ಯಸಾಧನೆಯೂ ಅದರಲ್ಲಿ ಸೇರಿತ್ತು. ಪಠ್ಯಕ್ರಮದಲ್ಲಿ ಓದು ಬರೆಹ, ಕಾವ್ಯವಾಚನ, ಅಂಕಗಣಿತ, ಅಂಗಸಾಧನೆ, ಸಂಗೀತ-ಇವೆಲ್ಲ ಸೇರಿದ್ದವು. ಹೆಣ್ಣುಮಕ್ಕಳಿಗೆ ಮನೆಯಲ್ಲೇ ಶಿಕ್ಷಣವೀಯುತ್ತಿದ್ದರು. ಅವರು ಸಾಮಾಜಿಕವಾಗಿ ಮುಂದೆ ಬರುವುದು ಸಂಪ್ರದಾಯಕ್ಕೆ ಒಪ್ಪುತ್ತಿರಲಿಲ್ಲ. 

	ಒಟ್ಟಿನಲ್ಲಿ ಪ್ರಾಚೀನ ಗ್ರೀಕ್ ಶಿಕ್ಷಣ ಆಯಾ ನಗರರಾಜ್ಯದ ಜೀವನ ಪರಿಸ್ಥಿತಿಗೆ ಒಪ್ಪುವಂತೆ ವ್ಯವಸ್ಥೆಗೊಂಡಿತ್ತು. ಜೀವನದೃಷ್ಟಿಗೂ ಅವಶ್ಯಕತೆಗೂ ಅನುಗುಣವಾಗಿ ರೂಪುಗೊಂಡಿತ್ತು. 

	ಸಾಫಿಸ್ಟರ ಪ್ರಭಾವ : ಭಾರತದಂತೆ ಪ್ರಾಚೀನ ಆಥೀನಿಯನರಲ್ಲೂ ಹಿಂದೆ, ಗುರುಗಳು ಯಾವ ಪ್ರತಿಫಲವೂ ಇಲ್ಲದೆ ಶಿಷ್ಯರಿಗೆ ವಿದ್ಯೆ ಕಲಿಸುತ್ತಿದ್ದರು. ಆದರೆ ಅವರಲ್ಲಿ ಕ್ರಿ.ಪೂ. 5 ನೆಯ ಶತಮಾನದಲ್ಲಿ ಆರ್ಥಿಕ ಆಶೋತ್ತರ ಹುಟ್ಟಿಕೊಂಡು ಜ್ಞಾನವನ್ನು ವಿಕ್ರಯಿಸುವ ಸಂಪ್ರದಾಯ ಆರಂಭವಾಯಿತು. ಸಾಫಿಸ್ಟರೆಂಬ ಕೂಲಿ ಪಂಡಿತರು ದುಡ್ಡಿಗೆ ಪಾಠ ಹೇಳುವ ವೃತ್ತಿಯನ್ನೇ ಅವಲಂಬಿಸಿದ್ದರೂ. ಶ್ರೀಮಂತರು ಅವರಿಂದ ತತ್ತ್ವಶಾಸ್ತ್ರ, ಅಲಂಕಾರ, ವಾಙ್ಮಯಕಲೆ ಮುಂತಾದವನ್ನು ಹೇಳಿಸಿಕೊಂಡು ಹಣ ಕೊಡುತ್ತಿದ್ದರು. ಸುಲಭವಾಗಿ ಹಣಗಳಿಸಬಹುದಾದ ಈ ಕಸಬನ್ನು ಅವಲಂಬಿಸಿದ, ಅಷ್ಟಾಗಿ ಪಾಂಡಿತ್ಯವಿಲ್ಲದ ಕೆಲವರು ಕುತರ್ಕದ ತಮ್ಮ ಕೌಶಲ್ಯದಿಂದ ಜನರನ್ನು ಭ್ರಮೆಗೊಳಿಸುವ ಕಲೆಯಲ್ಲಿ ಕುಶಲರೆನಿಸಿದ್ದರು. ಅಂಥವರು ಇಡೀ ಗುರುಕುಲಕ್ಕೆ ಅಪಕೀರ್ತಿ ತಂದರು.

	ಉನ್ನತ ಶಿಕ್ಷಣ: 18 ರಿಂದ 20 ವರ್ಷದ ವರೆಗೆ ಕಲೆ, ಸಾಹಿತ್ಯ, ತತ್ತ್ವಶಾಸ್ತ್ರ, ಮುಂತಾದ ಜ್ಞಾನವನ್ನು ಯುವಕರಿಗೆ ಹಿಂದಿನಿಂದಲೂ ಅಲ್ಲಿ ಬೋಧಿಸುತ್ತಿದ್ದರು. ಸಾಫಿಸ್ಟರು ಕುಟಿಲ ಕೌಶಲದ ಕೂಲಿ ಪಂಡಿತರಾಗಿದ್ದರೂ ಅವರಲ್ಲಿ ಕೆಲವರಾದರೂ ನಿಜವಾದ ಜ್ಞಾನಿಗಳಾಗಿದ್ದು ಉದ್ದಾಮಪಂಡಿತರೆನಿಸಿದ್ದರು; ತಮ್ಮ ಶಿಷ್ಯರಿಗೆ ಆಳವಾದ ವ್ಯಾಸಂಗ ಮಾಡಿಸುತ್ತಿದ್ದರು. ಅಂಥವರ ಯತ್ನದಿಂದ ಅಲ್ಲಿ ಉನ್ನತ ಶಿಕ್ಷಣಕ್ಕೆ ನಿರ್ದಿಷ್ಟ ತಳಹದಿ ರೂಪುಗೊಂಡಿತು. ಅದಕ್ಕಾಗಿ ಅನೇಕ ವಿದ್ಯಾಲಯಗಳು (ಸ್ಕೂಲ್ಸ್) ಆರಂಭವಾದವು. ಭಾಷೆ, ಅಲಂಕರಶಾಸ್ತ್ರ, ವ್ಯಾಕರಣ, ತತ್ತ್ವಶಾಸ್ತ್ರ,-ಇವುಗಳ ಆಳವಾದ ವ್ಯಾಸಂಗಕ್ಕೆ ಪ್ರೋತ್ಸಾಹ ದೊರೆಯಿತು. ಆ ವಿದ್ಯಾಲಯಗಳು ಕಾಲಕ್ರಮದಲ್ಲಿ ಗ್ರೀಕ್ ಮತ್ತು ರೋಮನ್ ಸಾಹಿತ್ಯದ ಮೇಲೆ ಪ್ರಭಾವ ಬೀರಿದುವು. ಪ್ರೊಟಾಗೋರಾಸನಂಥ ಪಂಡಿತರು ವ್ಯಾಕರಣ ಶಾಸ್ತ್ರವನ್ನು ರಚಿಸಿಕೊಟ್ಟರು. ಪ್ಲೇಟೊ ಮತ್ತು ಅವನ ಶಿಷ್ಯ ಆರಿಸ್ಟಾಟಲರಂಥ ಪಂಡಿತರು ಆ ಕಾಲದಲ್ಲಿದ್ದು ಜ್ಞಾನರಾಜ್ಯಕ್ಕೆ ಮಹತ್ತರವಾದ ಕಾಣಿಕೆಯನ್ನು ಸಲ್ಲಿಸಿದರು.
ವಯಸ್ಕರ ಶಿಕ್ಷಣ: ಸಾಫಿಸ್ಟರ ಯತ್ನದಿಂದ ಉನ್ನತ ಶಿಕ್ಷಣಕ್ಕೆ ತಳಹದಿ ದೊರೆತಂತೆ ವಯಸ್ಕರ ಶಿಕ್ಷಣಕ್ಕೂ ಅವಕಾಶವಾಯಿತು. ಶ್ರೀಮಂತರನೇಕರು ಆಜೀವವೂ ಜ್ಞಾನಾರ್ಜನೆಯಲ್ಲಿ ತೊಡಗಿರುವುದು ಒಂದು ಬಗೆಯ ವಿಲಾಸ ಜೀವನವೆನಿಸುತ್ತ ಬಂತು. ಹೇಗೇ ಆಗಲಿ, ವಯಸ್ಕರಲ್ಲಿ ವಿದ್ಯಾಪ್ರಚಾರ ಸಾರ್ವತ್ರಿಕವಾಗಿ ನಡೆಯಲು ಅವಕಾಶವಾಯಿತು.
ಪ್ಲೇಟೊ ಮತ್ತು ಆರಿಸ್ಟಾಟಲ್‍ರ ಶಿಕ್ಷಣ ದೃಷ್ಟಿ: ಅಂದಿನ ಆಥೆನ್ಸಿನ ವಿದ್ವದ್ವಾತಾವರಣದ ಫಲವಾಗಿ ಜ್ಞಾನಾರಾಜ್ಯದ ಅಮೂಲ್ಯ ಕೃತಿಗಳ ರಚನೆಗೆ ಅವಕಾಶವಾಯಿತು. ಪ್ಲೇಟೊ ಮತ್ತು ಆರಿಸ್ಟಾಟಲರಂಥ ಮಹಾಪಂಡಿತರು ನಡೆಸಿದ ತತ್ತ್ವಚಿಂತನೆ ಅವರ ಕಾಲದಂತೆ ಇಂದಿಗೂ ಮಾನ್ಯವೆನಿಸುವಂತಿದೆ. ಆದ್ದರಿಂದಲೇ ಅವರ ಯತ್ನ ಪಾಶ್ಚಾತ್ಯ ಸಾಹಿತ್ಯ ಸಂಸ್ಕøತಿ ನಾಗರಿಕತೆಗಳ ಮೇಲೆ ಇತ್ತೀಚಿನವರೆಗೂ ಪ್ರಭಾವ ಬೀರುತ್ತ ಬಂದಿರುವುದು.

ಪ್ಲೇಟೊ ತನ್ನ ರಿಪಬ್ಲಿಕ್ ಮತ್ತು ಲಾಸ್ ಎಂಬ ಕೃತಿಗಳಲ್ಲಿ ಶಿಕ್ಷಣದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾನೆ. ರಿಪಬ್ಲಿಕ್ ರಾಜ್ಯಶಾಸ್ತ್ರ ಗ್ರಂಥವಿರಬಹುದೆಂದು ತೋರಿದರೂ ಅದು ನಿಜವಾಗಿ ಶಿಕ್ಷಣ ಶಾಸ್ತ್ರಕ್ಕೆ ಸಂಬಂಧಿಸಿದ ಮಹಾಕೃತಿ. ಅದರ ಮಹತ್ತ್ವವನ್ನೂ ಅರಿತಿದ್ದ ರೂಸೊ `ಸಾರ್ವತ್ರಿಕ ಶಿಕ್ಷಣದ ಆರ್ಥವನ್ನು ತಿಳಿಯಬೇಕಾದರೆ ಪ್ಲೇಟೊವಿನ ರಿಪಬ್ಲಿಕ್ ಗ್ರಂಥವನ್ನು ಓದು ಎಂದು ತನ್ನ ಈಮೈಲ್ ಕಾದಂಬರಿಯಲ್ಲಿ ಸೂಚಿಸಿದ್ದಾನೆ. ಅವನ ಶಿಷ್ಯ ಆರಿಸ್ಟಾಟಲನೂ ತನ್ನ ಪಾಲಿಟಿಕ್ಸ್ ಎಂಬ ಕೃತಿಯಲ್ಲಿ ಶಿಕ್ಷಣದ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾನೆ.

ಯಾವ ರಾಜಕೀಯ ವ್ಯವಸ್ಥೆಯಲ್ಲೇ ಆಗಲಿ ಅದಕ್ಕೆ ಪೌರಶಿಕ್ಷಣ ಆಧಾರವೆಂದು ಭಾವಿಸಿದ್ದ ಪ್ಲೇಟೊ ವ್ಯಕ್ತಿ ಶಿಕ್ಷಣಕ್ಕೆ ಪ್ರಾಧಾನ್ಯವಿತ್ತಿದ್ದಾನೆ. ಒಳ್ಳೆಯ ಶಿಕ್ಷಣದಿಂದ ಒಳ್ಳೆಯ ವ್ಯಕ್ತಿಯಾದರೆ ಮನುಷ್ಯ ತನ್ನ ಜೀವನದಲ್ಲಿ ಒಳ್ಳೆಯ ಮಾನವನಂತೆ ನಡೆದುಕೊಳ್ಳವನೆಂಬುದು ಆತನ ವಾದ. ಅಂಥ ಶಿಕ್ಷಣ ಬರೀ ವ್ಯಕ್ತಿಗತವಾಗಿರದೆ ಸಮಾಜದ ಸೃಜನಾತ್ಮಕ ಶಕ್ತಿಯೂ ಆಗಬಲ್ಲುದೆಂದು ಆತ ಪ್ರತಿಪಾದಿಸಿದ್ದಾನೆ. ಆದರೆ ಕುಟುಂಬಜೀವನದ ಸ್ಥಾನಮಾನಗಳನ್ನು ಕಡೆಗಣಿಸಿ ಮಕ್ಕಳನ್ನು ಸಮಾಜದ ಒಡೆತನಕ್ಕೆ ಒಪ್ಪಿಸುವ ಅಗತ್ಯವನ್ನು ಎತ್ತಿಹಿಡಿದಿದ್ದಾನೆ. ಆರಿಸ್ಟಾಟಲ್ ತನ್ನ ಗುರುವಿನ ಅನೇಕ ಭಾವನೆಗಳನ್ನು ಒಪ್ಪಿದ್ದರೂ ಈ ಅಭಿಪ್ರಾಯವನ್ನು ಒಪ್ಪಿರಲಿಲ್ಲ. ರೂಸೋ ಆ ಬಗ್ಗೆ ಟೀಕಿಸುತ್ತ `ನಮ್ಮ ಕುಟುಂಬದ ಹತ್ತಿರದ ಬಂಧುವರ್ಗದವರಲ್ಲಿ ಬೆಳೆಯದ ಬಾಂಧವ್ಯ ರಾಷ್ಟ್ರಪ್ರೇಮಕ್ಕೆ ಹೇಗೆ ಅನುವುಮಾಡಿ ಕೊಟೀತು? ಒಳ್ಳೆಯ ತಂದೆಯಾಗಿರದೆ, ಒಳ್ಳೆಯ ಮಗನಾಗಿರದೆ ಒಳ್ಳೆಯ ಪತ್ನಿಯಾಗಿರದೆ ಒಳ್ಳೆಯ ಪೌರನಾಗಬಲ್ಲನೆ? ಎಂದು ಟೀಕಿಸಿದ್ದಾನೆ. 

ಪ್ಲೇಟೋ ಶ್ರೀಮಂತ ಪಕ್ಷಪಾತಿ. ಅತನ ಶಿಕ್ಷಣ ದೃಷ್ಟಿ ಶ್ರೀಮಂತರ ವಿಲಾಸಜೀವನಕ್ಕೆ ಒಪ್ಪುವಂತಿದ್ದು ಕಾರ್ಮಿಕರ ಮತ್ತು ವಾಣೀಜ್ಯೋದ್ಯಮಿಗಳ ಆಸಕ್ತಿಯನ್ನು ನಿರ್ಲಕ್ಷಿಸಿತ್ತು. ಪ್ರತಿಭಾವಂತ ಶ್ರೀಮಂತರಿಗೆ ದೀರ್ಘಾವಧಿಯ ಸಾಂಸ್ಕøತಿಕ ಶಿಕ್ಷಣವಿತ್ತು. ಸೈನ್ಯದ ಮತ್ತು ಸಾರ್ವಜನಿಕ ಉನ್ನತ ಸ್ಥಾನಗಳಿಗೆ ನೇಮಿಸಬೇಕೆಂದು ಮಿಕ್ಕ ಪ್ರಯೋಗಸಾಮಥ್ರ್ಯವುಳ್ಳವರಿಗೆ ಸೈನಿಕ ಶಿಕ್ಷಣವಿತ್ತು ಸೈನ್ಯದಲ್ಲಿ ಯೋಧರನ್ನಾಗಿಯೂ ಕೆಳದರ್ಜೆಯ ಸಾರ್ವಜನಿಕ ಸ್ಥಾನಗಳಿಗೂ ನೇಮಿಸಬೇಕೆಂದು ಪ್ರತಿಪಾದಿಸಿದ್ದಾನೆ. ಶ್ರೀಮಂತ ಪ್ರತಿಭಾವಂತರಿಗೆ 20 ನೆಯ ವರ್ಷದಿಂದ 10 ವರ್ಷಗಳ ಕಾಲ ಗಣಿತಶಾಸ್ತ್ರವನ್ನೊಳಗೊಂಡ ಶಿಸ್ತಿನ ಶಿಕ್ಷಣವನ್ನೂ ಮೂವತ್ತನೆಯ ವರ್ಷದಿಂದ ಅದರಲ್ಲಿ ಆಯ್ದ ಕೆಲವರಿಗೆ ತತ್ತ್ವಶಾಸ್ತ್ರ ಮತ್ತು ತರ್ಕಶಾಸ್ತ್ರಗಳಲ್ಲಿ ಮತ್ತೆ ಐದುವರ್ಷಗಳ ಶಿಕ್ಷಣವನ್ನೂ ಕೊಟ್ಟು ಉನ್ನತ ಸಾರ್ವಜನಿಕ ಹುದ್ದೆಗಳಿಗೆ ಸಿದ್ಧಪಡಿಸಬೇಕಾಗಿತ್ತು. ಐವತ್ತನೆಯ ವಯಸ್ಸಿನಲ್ಲಿ ಅವರು ನಿವೃತ್ತರಾಗಿ ಧ್ಯಾನ ಮತ್ತು ತತ್ವಚಿಂತನೆಯ ಜೀವನ ನಡೆಸಬೇಕೆಂದು ಆತ ಸಲಹೆ ಮಾಡಿದ್ದಾನೆ. ಅಂಥ ಸುಸಂಸ್ಕøತರು ಅವನ ಕನಸಿನ ರಾಜ್ಯದ ಸಂರಕ್ಷಕರೂ ಪ್ರಗತಿ ಸಾಧಕರೂ ಆಗುವರೆಂದು ಆತನ ಭಾವನೆ. ಪ್ಲೇಟೋವಿನ ಶಿಕ್ಷಣ ಕ್ಷೇತ್ರದ ಈ ಪಕ್ಷಪಾತ ನೀತಿಯನ್ನು ಕೆಲವರು ಲೋಕಸತ್ತೆಗೆ ಒಪ್ಪದ ನೀತಿಯೆಂದು ಟೀಕಿಸಿದರೆ ಮತ್ತೆ ಕೆಲವರು ಅದು ಅವರವರಿಗೊಪ್ಪುವ ಶಿಕ್ಷಣವೀಯಬೇಕೆಂಬ ಆಧುನಿಕ ನೀತಿಯೆಂದು ಪ್ರಶಂಸಿದ್ದಾರೆ.

ಪಾಶ್ಚಾತ್ಯ ಶಿಕ್ಷಣದ ಮೇಲೆ ಗ್ರೀಕರ ಪ್ರಭಾವ: ಪ್ಲೇಟೊ ಮತ್ತು ಆರಿಸ್ಟಾಟಲ್‍ರು ಉದ್ಘಾಟಿಸಿದ ಪ್ರಾಚೀನ ಗ್ರೀಕರ ಶಿಕ್ಷಣದೃಷ್ಟಿ ಆಧುನಿಕ ಕಾಲದವರೆಗೂ ಪಾಶ್ಚಾತ್ಯ ಶಿಕ್ಷಣ ಕ್ಷೇತ್ರದ ಮೇಲೆ ತನ್ನ ಪ್ರಭಾವ ಬೀರುತ್ತ ಬಂದಿದೆ. ಮಹಿಳೆಯರಿಗೂ ಗಂಡಸರಿಗೆ ಕೊಡುವ ಶಿಕ್ಞಣವನ್ನೇ ಕೊಡಬೇಕೆಂಬ ತತ್ತ್ವವನ್ನು ಇಂಗ್ಲೆಂಡಿನಂಥ ಕೆಲವು ರಾಷ್ಟ್ರಗಳು ಹತ್ತೊಂಬತ್ತನೆಯ ಶತಮಾನದ ಕೊನೆಯವರೆಗೂ ಒಪ್ಪಿರಲಿಲ್ಲ. ಅದರೆ ಈಚೆಗೆ ಕಾರ್ಯಕ್ಷೇತ್ರದಲ್ಲಿ ಅವರ ದೃಷ್ಟಿ ಅನುಷ್ಠಾನಕ್ಕೆ ಬರುತ್ತಿದೆ. ಎಂಜಿನಿಯರಿಂಗ್ ಆದಿಯಾದ ಎಂಥ ಕಠಿಣ ಶ್ರಮದ ಶಿಕ್ಷಣಕ್ಕೂ ಈಗ ಮಹಿಳೆಯರು ಬರುತ್ತಿರುವುದನ್ನು ನೋಡಿದರೆ ಈ ಅಂಶ ಸ್ಪಷ್ಟಪಡುತ್ತದೆ. ಹಾಗೆಯೇ ವಯಸ್ಕರ ಶಿಕ್ಷಣ, ಉನ್ನತ ಸಾಂಸ್ಕøತಿಕ ಶಿಕ್ಷಣ, ಶಕ್ತಿಸಾಮಥ್ರ್ಯಗಳನ್ನವಲಂಬಿಸಿ ನೀಡುವ ಶಿಕ್ಷಣಕ್ಕೆ ವೈಯಕ್ತಿಕ ಗಮನ, ತತ್ತ್ವಶಾಸ್ತ್ರದಂಥ ವಿಷಯಗಳ ವ್ಯಾಸಂಗಕ್ಕೆ ವ್ಯಕ್ತಿ ಅನುಭವವನ್ನೂ ಪ್ರೌಢಿಮೆಯನ್ನೂ ಗಳಿಸಿರಬೇಕೆಂಬ ನಿಯಮ ಮುಂತಾದ ಆಧುನಿಕ ಪ್ರವೃತ್ತಿಗಳಿಗೆಲ್ಲ ಅವರು ಜನಕರೆನ್ನಬಹುದು. ಎಲ್ಲ ಶಿಕ್ಷಣವೂ ಮಾನವರಲ್ಲಿ ಒಳಿತನ್ನು ಬೆಳಸಬೇಕೆಂಬ ಪ್ಲೇಟೊವಿನ ದೃಷ್ಟಿ ಎಲ್ಲ ದೇಶಗಳ ಶಿಕ್ಷಣದ ಗುರಿಯ ಮೇಲೂ ತನ್ನ ಪ್ರಭಾವವನ್ನು ಬೀರಿದೆ. ಆರಿಸ್ಟಾಟಲ್ ತನ್ನ ಪಾಲಿಟಿಕ್ಸ್ ಕೃತಿಯಲ್ಲಿ ಶಿಕ್ಷಣ ಸೇವಾವ್ಯವಸ್ಥೆಯನ್ನೂ ರಾಜ್ಯ ನಿಯಂತ್ರಿಸಬೇಕೆಂದೂ ಪೌರ ಶಿಕ್ಷಣ ಅದರ ಮುಖ್ಯ ಉದ್ದೇಶವಾಗಿರಬೇಕೆಂದೂ ಮಾಡಿರುವ ಸಲಹೆ ಈಚೆಗೆ ಅನುಷ್ಠಾನಕ್ಕೆ ಬರುತ್ತಿದೆ. ಸರ್ಕಾರ ಪೌರರನ್ನು ತನ್ನ ದೃಷ್ಟಿಪಥಕ್ಕೊಪ್ಪುವಂತೆ ರೂಪಿಸಬೇಕೆಂಬ ಅವನ ಸಲಹೆ ಕಮ್ಯೂನಿಸ್ಟ್ ರಾಷ್ಟ್ರಗಳಿಗೆ ತುಂಬ ಪ್ರಿಯವೆನಿಸಿದೆ. ಶಿಕ್ಷಣ ಮಕ್ಕಳಲ್ಲಿ ಸಾಮಾಜಿಕ ವ್ಯಕ್ತಿತ್ವವನ್ನೂ ರೂಪಿಸಬೇಕೆಂಬ ಸಲಹೆ 1926 ರಲ್ಲಿ ಬ್ರಿಟನ್ನಿನಲ್ಲಿ ನೇಮಕವಾಗಿದ್ದ ಹ್ಯಾಡೊ ಸಮಿತಿಯ ಶಿಕ್ಷಣ ಸುಧಾರಣೆಯ ವರದಿಯಲ್ಲಿ ಅಂಗೀಕಾರ ಪಡೆದಿರುವಂತಿದೆ. ವ್ಯಕ್ತಿ ಸಮಾಜವನ್ನೂ ರಾಷ್ಟ್ರವನ್ನೂ ಸದ್ಭಾವನೆಯಿಂದ ಕಾಣಬೇಕೆಂಬ ಅವನ ಸಲಹೆ ಆಧುನಿಕ ಶಿಕ್ಷಣಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿರುವ ಭಾವನಾತ್ಮಕ ಶಿಕ್ಷಣಕ್ಕೆ ತಳಹದಿಯೆನಿಸುವಂತಿದೆ. ಶಿಕ್ಷಣ ಜೀವನದ ಪರಿಸ್ಥಿತಿಯನ್ನೂ ತತ್ತ್ವದೃಷ್ಟಿಯನ್ನೂ ಆಧಾರ ಮಾಡಿಕೊಂಡು ಜನತೆಯ ಆಶೋತ್ತರಗಳನ್ನು ಪೂರೈಸುವಂತೆ ರೂಪುಗೊಳ್ಳಬೇಕೆಂಬ ವಾದ ಗ್ರೀಕರ ಶಿಕ್ಷಣ ಪದ್ಧತಿಯಲ್ಲಿ ಪುರಸ್ಕಾರ ಪಡೆದಿದೆ. 
ಒಟ್ಟಿನಲ್ಲಿ ಎರಡೂವರೆ ಸಹಸ್ರ ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಗ್ರೀಸಿನ ಶಿಕ್ಷಣ ಏಕಪ್ರಕಾರವಾಗಿ ಪಾಶ್ಚಾತ್ಯ ಶಿಕ್ಷಣವನ್ನು ಪರಿಣಾಮಗೊಳಿಸುತ್ತ ಬಂದಿದೆ.

ಆಧುನಿಕ ಗ್ರೀಸಿನಲ್ಲಿ ಶಿಕ್ಷಣ: ಆಧುನಿಕ ಗ್ರೀಸಿನಲ್ಲಿ ಶಿಕ್ಷಣ ಮೂರು ಅಂತಸ್ತುಗಳಲ್ಲಿ ವ್ಯವಸ್ಥೆಗೊಂಡಿದೆ. 2 ವರ್ಷಗಳ ಕಿಂಡರ್ ಗಾರ್ಟನ್ ಮತ್ತು 6 ವರ್ಷಗಳ ಪ್ರಾಥಮಿಕ ಶಾಲೆ ಇವನ್ನೊಳಗೊಂಡಂತೆ ಪ್ರಾಥಮಿಕ ಶಿಕ್ಷಣ-ಒಟ್ಟು 8 ವರ್ಷಗಳ ಅವಧಿಯದು; ಪ್ರೌಢಶಿಕ್ಷಣ 3 ವರ್ಷಗಳ ಕಿರಿಯ ಪ್ರೌಢಶಾಲೆ ಮತ್ತು 3 ವರ್ಷಗಳ ಹಿರಿಯ ಪ್ರೌಢಶಾಲೆ-ಒಟ್ಟು 6 ವರ್ಷಗಳ ಅವಧಿಯದು; ಉನ್ನತ ಶಿಕ್ಷಣ, ಕಿಂಡರ್ ಗಾರ್ಟನ್ ಅಧ್ಯಾಪಕರ ವೃತ್ತಿ ಒಂದು ವರ್ಷಗಳದೂ ಎಂಜಿನಿಯರಿಂಗ್ ಮುಂತಾದ ವೃತ್ತಿ ಶಿಕ್ಷಣ 6 ವರ್ಷಗಳದೂ ಆಗಿರುತ್ತದೆ. ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ನಡೆಸುತ್ತಿದ್ದರೂ ಅನ್ಯಭಾಷಾ ಬೋಧನೆಗೂ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಕ್ಕೂ ಅನೇಕ ಖಾಸಗಿ ಶಾಲೆಗಳು ಅಸ್ತಿತ್ವದಲ್ಲಿವೆ. ಅವು ಸರ್ಕಾರಿ ಶಾಲೆಗಳಿಗಿಂತ ಉತ್ತಮವಾದ ಶಿಕ್ಷಣಮಟ್ಟವನ್ನು ಸಾಧಿಸುತ್ತಿರುವುದಲ್ಲದೆ (ಜಿಮ್ನ್ಯಾಸಿಯಂ) ಶಿಕ್ಷಣಾನಂತರ ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಸೇರಲು ಅನುಮತಿ ದೊರಕುವುದು. ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳೂ ಪ್ರೌಢಶಾಲಾ ಮಟ್ಟದ ಶಿಕ್ಷಣವನ್ನೊದಗಿಸುತ್ತದೆ. ಆದರೆ ಅಲ್ಲಿಯ ಶಿಕ್ಷಣ ಮುಗಿಸಿದವರು ವಿಶ್ವವಿದ್ಯಾಲಯಕ್ಕೆ ಸೇರಲು ಅವಕಾಶವಿರುವುದಿಲ್ಲ. 1962 ರ ಜನಗಣತಿಯ ಪ್ರಕಾರ ಹತ್ತು ವರ್ಷಗಳಿಗೆ ಮೇಲ್ಪಟ್ಟ ವಯೋಮಾನದ ಸೇ. 82.2 ರಷ್ಟು ಅಕ್ಷರಸ್ಥರಿರುವರು. ಗಂಡಸರಲ್ಲಿ ಅಕ್ಷರಸ್ಥರ ಸೇ. ಪ್ರಮಾಣ 92.4, ಹೆಂಗಸರಲ್ಲಿ 72. ಅವರಲ್ಲಿ ಸೇ. 1.8 ರಷ್ಟು ಉನ್ನತ ಶಿಕ್ಷಣವನ್ನೂ ಸೇ. 8.9ರಷ್ಟು ಪ್ರೌಢಶಿಕ್ಷಣವನ್ನೂ ಸೇ. 43.3 ರಷ್ಟು ಮಂದಿ ಪ್ರಾಥಮಿಕ ಶಿಕ್ಷಣವನ್ನೂ ಮುಗಿಸಿರುವರು. ವರ್ಷಂಪ್ರತಿ 8 ಲಕ್ಷ ಮಂದಿ ಪ್ರಾಥಮಿಕ ಶಾಲೆಗೂ 3 ಲಕ್ಷ ಮಂದಿ ಪ್ರೌಢಶಾಲೆಗೂ ಸೇರುವರು. ಪ್ರಾಥಮಿಕ ಶಾಲೆಯಲ್ಲಿ 6 ವರ್ಷಕಾಲ ಕಾನೂನಿನ ಪ್ರಕಾರ ಕಡ್ಡಾಯ ಶಿಕ್ಷಣ ಆಚರಣೆಯಲ್ಲಿದೆ. ಅದನ್ನು 9 ವರ್ಷಕ್ಕೆ ಹೆಚ್ಚಿಸುವ ಯೋಜನೆ ಸರ್ಕಾರದ ಮುಂದಿದೆ.

1833 ರಲ್ಲಿ ಬವೇರಿಯದ ಪ್ರಿನ್ಸ್ ಆಟೊ ಅಲ್ಲಿನ ಮೊದಲ ದೊರೆಯಾದಾಗ ಅಲ್ಲಿ ಪೂರ್ಣವಾಗಿ ಕೇಂದ್ರೀಯ ನಿಯಂತ್ರಣದ ಶಿಕ್ಷಣ ಪದ್ಧತಿ ಅನುಷ್ಠಾನಕ್ಕೆ ಬಂತು. ಸರ್ಕಾರದ ಶಾಲೆಯ ಅಧ್ಯಾಪಕರೂ ಶಿಕ್ಷಣದ ಆಡಳಿತಗಾರರೂ ಸರ್ಕಾರಿ ಅಧಿಕಾರಿಗಳೇ ಆಗಿದ್ದರು. 1967 ರ ತನಕ ಚುನಾಯಿತ ಮಂತ್ರಿಯೊಬ್ಬ ಶಿಕ್ಷಣ ಶಾಖೆಯನ್ನು ನೋಡಿಕೊಳ್ಳುತ್ತಿದ್ದ. ಅನಂತರ ಮುಖ್ಯಮಂತ್ರಿ ಪಾರ್ಲಿಮೆಂಟಿನ ಚುನಾಯಿತ ಸದಸ್ಯರೊಬ್ಬರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸುತ್ತಿದ್ದ. ಶಿಕ್ಷಣ ಸಚಿವಾಲಯ ಪಠ್ಯಕ್ರಮ, ಪರೀಕ್ಷಾಪದ್ಧತಿ, ಪಠ್ಯಪುಸ್ತಕಗಳ ಆಯ್ಕೆ ಮುಂತಾದವನ್ನು ನಿಯಂತ್ರಿಸುತ್ತದೆ. ಅಧ್ಯಾಪಕರನ್ನು ಸ್ಪರ್ಧಾಪರೀಕ್ಷೆಯೊಂದರ ಮೂಲಕ ಆಯ್ದು ಬೇರೆ ಬೇರೆ ಶಾಲೆಗಳಿಗೆ ನೇಮಿಸಿಕೊಳ್ಳುವರು. ಅನುಭವವುಳ್ಳ ಆಧ್ಯಾಪಕರನ್ನು ಮುಂದೆ ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವುದುಂಟು.

ಪಠ್ಯಕ್ರಮ: ಹತ್ತೊಂಬತ್ತನೆಯ ಶತಮಾನದ ಆದಿಯಿಂದ ಗ್ರೀಕ್ ಕ್ರೈಸ್ತ ಸಂಸ್ಕøತಿಯನ್ನು ಮಕ್ಕಳಲ್ಲಿ ಬೆಳೆಸುವುದು ಶಾಲಾ ಶಿಕ್ಷಣದ ಗುರಿಯಾಗಿತ್ತು. 1952 ರಲ್ಲಿ ಆಚರಣೆಗೆ ಬಂದ ರಾಷ್ಟ್ರಘಟನೆ ಮಕ್ಕಳಲ್ಲಿ ನೈತಿಕ ಮತ್ತು ಬೌದ್ಧಿಕ ಬೆಳೆವಣಿಗೆಯನ್ನು ಸಾಧಿಸುವುದರ ಜೊತೆಗೆ ಗ್ರೀಕ್ ಕ್ರೈಸ್ತ ನಾಗರಿಕತೆಯನ್ನನುಸರಿಸಿ ರಾಷ್ಟ್ರೀಯ ಪ್ರಜ್ಞೆಯನ್ನೂ ಮೂಡಿಸಬೇಕೆಂದು ಸೂಚಿಸಿದೆ. 1967 ರಲ್ಲಿ ಅಸ್ತಿತ್ವಕ್ಕೆ ಬಂದ ಸೈನ್ಯಾಡಳಿತ ಇದೇ ಗುರಿಯನ್ನು ಒತ್ತಿ ಹೇಳುತ್ತ ಬಂತು. ಅದಕ್ಕಾಗಿ ಸೂಕ್ತರೀತಿಯ ಪಠ್ಯಕ್ರಮವನ್ನೂ ಗೊತ್ತು ಮಾಡಿತು.

ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಗ್ರೀಕ್ ಮಾತೃಭೂಮಿಯ ಪ್ರೇಮ, ಕ್ರೈಸ್ತಮತದವರಲ್ಲಿ ಭಕ್ತಿ, ನೈತಿಕ ಜೀವನ- ಇವನ್ನು ಬೆಳೆಸಲುಯತ್ನಿಸುವರು. ಅದಕ್ಕನುಕೂಲಿಸುವಂತೆ ಅಲ್ಲಿ ಧಾರ್ಮಿಕ ಶಿಕ್ಷಣವನ್ನೂ ಗ್ರೀಕ್ ಸಾಹಿತ್ಯದ ವ್ಯಾಸಂಗವನ್ನೂ ಸೇರಿಸಿರುವರು. ಜೊತೆಗೆ, ಇತರ ಸಾಂಪ್ರದಾಯಿಕ ಪಠ್ಯವಿಷಯಗಳನ್ನೂ ಬೋಧಿಸುವರು. ಗ್ರೀಕ್ ಆರ್ತೊಡಾಕ್ಸ್ ಧರ್ಮದವರಲ್ಲದವರು ಧಾರ್ಮಿಕ ಶಿಕ್ಷಣ ಭೋದನೆಗೆ ಸೇರುವಂತಿಲ್ಲ. ವಯಸ್ಕರಿಗಾಗಿ ಸರ್ಕಾರದ ಮತ್ತು ಖಾಸಗಿ ರಾತ್ರಿ ಶಾಲೆಗಳೂ ಇವೆ. ಅಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯದ, 12 ವರ್ಷಗಳಿಂದ 20 ವರ್ಷಗಳವರೆಗಿನ ವಯಸ್ಕರೆಲ್ಲ ಕಡ್ಡಾಯವಾಗಿ ಹಾಜರಾಗಬೇಕು.

ಪ್ರೌಢಶಾಲೆಯಲ್ಲೂ ಪ್ರಾತಮಿಕ ಶಿಕ್ಷಣದ ಉದೇಶವನ್ನೇ ಮುಂದುರಿಸುವರು. ಅದಕ್ಕಾಗಿ ಅಲ್ಲಿ ಗ್ರೀಕ ಸಾಹಿತ್ಯದ ಮತ್ತು ಧರ್ಮದ ಆಳವಾದ ಅಧ್ಯಯನ ನಡೆಯುವುದು. ಒಂದು ದೃಷ್ಟಿಯಲ್ಲಿ ಸರ್ಕಾರದ ಪ್ರೌಢಶಾಲೆಗಳಲ್ಲಿ ಗ್ರೀಕ್ ಸಂಸ್ಕøತಿಯ ಹಾಗೂ ಧರ್ಮದ ಪ್ರಚಾರ ತೀಕ್ಷ್ಣವಾಗಿ ನಡೆಯುತ್ತದೆ.

ಕೆಲವು ಪ್ರೌಢಶಾಲೆಗಳು ಗಣಿತ ಮತ್ತು ಭೌತಶಾಸ್ತ್ರದ ವ್ಯಾಸಂಗಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿರುತ್ತವೆ. ಲಾಕ್ಷಣಿಕ ಪ್ರೌಢಶಾಲೆಗಳಲ್ಲಿ ಮುಖ್ಯವಾಗಿ ಸಾಹಿತ್ಯ ಮತ್ತು ಧರ್ಮ ಸಂಸ್ಕøತಿಗಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವುಂಟು. ಸಾಮಾನ್ಯವಾಗಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಅಷ್ಟಾಗಿ ಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ.
ಉನ್ನತ ಶಿಕ್ಷಣಕ್ಕಾಗಿ ವಿದ್ಯಾಲಯ ಸಮುದಾಯಗಳು ಏರ್ಪಟ್ಟಿವೆ. ತತ್ತ್ವಶಾಸ್ತ್ರ, ನ್ಯಾಯಶಾಸ್ತ್ರ, ಎಂಜಿನಿಯರಿಂಗ್, ನಿಸರ್ಗ ವಿಜ್ಞಾನ, ಗಣಿತ ಶಾಸ್ತ್ರ, ಕೃಷಿ ವಿಜ್ಞಾನ, ವೈದ್ಯಶಾಸ್ತ್ರ, ಔಷಧಿ ನಿರ್ಮಾಣ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಧರ್ಮ ಶಾಸ್ತ್ರ, ಕೈಗಾರಿಕಾ ವಿಜ್ಞಾನ, ಕಿಂಡರ್ ಗಾರ್ಟನ್ ಬೋಧನೆ-ಮುಂತಾದ ವಿಷಯಗಳಲ್ಲಿ ಉನ್ನತ ಶಿಕ್ಷಣವೀಯುವ ವಿದ್ಯಾಲಯಗಳಿವೆ. ಪ್ರತಿ ವಿದ್ಯಾಲಯ ಸಮೂಹವೂ ಅನೇಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿಭಾಗಗಳನ್ನೊಳಗೊಂಡಿರುತ್ತವೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಬೇಕೆಂದಿರುವ ವಿಷಯವನ್ನೂ ವಿದ್ಯಾಲಯವ್ಯೂಹದಲ್ಲಿ ಯಾವ ಸಂಸ್ಥೆಯಲ್ಲಿ ಓದಬೇಕೆಂದಿರುವವರೆಂಬುದನ್ನೂ ಸೂಚಿಸಬೇಕು. ಅದರ ಆಧಾರದ ಮೇಲೆ ಹಾಗೂ ಅವರು ಅದುತನಕ ಸಾಧಿಸಿರುವ ಶಿಕ್ಷಣಾಭಿವ್ಥದ್ಧಿಯಮಟ್ಟವನ್ನೂ ಆಧಾರ ಮಾಡಿಕೊಂಡು ಅವರಿಗೆ ಪ್ರವೇಶ ನೀಡಲಾಗುವುದು.
ಸದ್ಯದ ಪ್ರವೃತ್ತಿಗಳು: ಗ್ರೀಸ್ ಅಭಿವೃದ್ಧಿಶೀಲ ರಾಷ್ಟ್ರ ಅಲ್ಲಿನ ಆರ್ಥಿಕಾಭಿವೃದ್ಧಿಗೆ ಅಗತ್ಯವಾಗುವ ವಿಷಯಗಳು ಅಷ್ಟಾಗಿ ಪಠ್ಯವಸ್ತುವಿನಲ್ಲಿ ಸೇರಿಲ್ಲ. ಮಹಾಯುದ್ಧಾನಂತರ ಅಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಅಮೆರಿಕ ಮತ್ತು ಯೂರೋಪಿನ ಜನ ಬಂದು ನೆಲೆಸುತ್ತಿರುವರು. ಆದ್ದರಿಂದ ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳ ಬೋಧನೆಗೆ ಪಠ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಹಾಗೆಯೆ, ವಾಣಿಜ್ಯ ವ್ಯವಹಾರದ ವಿಷಯಗಳೂ ಸೇರುತ್ತಿವೆ. 1964 ರಿಂದ 15 ವರ್ಷದ ವಯಸ್ಸಿನವರೆಗೆ ಶಿಕ್ಷಣ ಕಡ್ಡಾಯ ಮಾಡಲಾಗಿದೆ. ಪ್ರೌಢಶಾಲೆಯಲ್ಲಿ ಬಗೆಬಗೆಯ ಐಚ್ಛಿಕ ವಿಷಯಗಳು ಸೇರುತ್ತಿವೆ. ಮುಖ್ಯವಾಗಿ ಅನ್ಯಭಾಷೆಗಳು ಅಕರ್ಷಣೀಯ ವಿಷಯಗಳಾಗುತ್ತಿವೆ. ಹಾಗೆಯೆ, ಪೂರ್ಣವಾಗಿ ಕೇಂದ್ರೀಕರಿಸಲಾಗಿದ್ದ ಶಿಕ್ಷಣದ ಆಡಳಿತವನ್ನು ವಿಕೇಂದ್ರೀಕರಿಸಿ ಸ್ಥಳೀಯ ಘಟಕಗಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಲಾಗುತ್ತಿದೆ. ಇದರಿಂದ ಗ್ರೀಕ್, ಸಾಹಿತ್ಯ, ಸಂಸ್ಕøತಿ, ಧರ್ಮ-ಇವಕ್ಕೆ ಸುಧಾರಣೆಗಳಿಂದ ಧಕ್ಕೆ ಬರುವುದೆಂದು ಸಾಂಪ್ರದಾಯಿಕ ಸಂಸ್ಥೆಗಳು ಪ್ರತಿಭಟಿಸಿದವು. 1967ರಲ್ಲಿ ನಡೆದ ಕ್ರಾಂತಿಯ ಅನಂತರ ಬಂದ ಸೇನಾಪ್ರಭುತ್ವ ಆಚರಣೆಗೆ ಬರುತ್ತಿದ್ದ ಸುಧಾರಣೆಗಳನ್ನು ಮೊಟಕು ಮಾಡಿದೆ.									(ಎನ್.ಎಸ್.ವಿ.)